ಮಂಗರಸ 2 -

	ಸುಮಾರು 1398. ಬ್ರಾಹ್ಮಣಕವಿ. ಅಭಿನವಾಭಿಧಾನಂ ಎಂಬ ನಿಘಂಟಿನ ಕರ್ತೃ. ಈತ ತನ್ನನ್ನು ಅಭಿನವ ಮಂಗರಸ ಎಂದು ಕರೆದುಕೊಂಡಿದ್ದಾನೆ. ಈತ ಕಮ್ಮೆಕುಲದ ವಿಶ್ವಾಮಿತ್ರ ಗೋತ್ರದ ರೆಮ್ಮಾರ್ಯ ರಾಮರಸನ ಮಗ. ಇವನ ಸ್ಥಳ ಶಿವಪುರ. ಆರಾಧ್ಯದೈವ ಶಶಿಪುರದ ಸೋಮೇಶ್ವರನನ್ನು ತನ್ನ ಗ್ರಂಥದಲ್ಲಿ ಕಾಂಡಗಳ ಸಮಾಪ್ತಿವಚನದಲ್ಲಿ ಸ್ಮರಿಸಿದ್ದಾನೆ. ಈತನಿಗೆ ಬಾಲಶಾರದೆ, ಅಭಿನವ ಬಾಲಸರಸ್ವತಿ ಎಂಬ ಬಿರುದುಗಳಿದ್ದಂತೆ ಕಂಡುಬರುತ್ತದೆ.

	ಈ ನಿಘಂಟು ವಾರ್ಧಕ ಷಟ್ಪಧಿಯಲ್ಲಿದೆ. ಇದು ಮಂಗರಾಜ ನಿಘಂಟು ಎಂದೂ ಪ್ರಸಿದ್ಧಿ ಪಡೆದಿದೆ. ಇದರಲ್ಲಿ ಸ್ವರ್ಗ, ಭೂ, ಪಾತಾಳ, ಸಾಮಾನ್ಯ, ನಾನಾರ್ಥ ಎಂಬ ಐದು ಕಾಂಡಗಳೂ 539 ಪದ್ಯಗಳೂ ಇದ್ದು ಒಂದೊಂದು ಕಾಂಡದಲ್ಲೂ ಅನೇಕ ವರ್ಗಗಳಿವೆ. ತನಗಿಂತ ಹಿಂದಣವರಾದ ವರರುಚಿ, ಹಲಾಯುಧ, ಗೋಪಾಲಕ, ಭಾಗುರಿ, ಧನಂಜಯ, ಸುರಹರಿ, ನಾಗವರ್ಮ ಮೊದಲಾದವರನ್ನು ಅನುಸರಿಸಿ ತಾನು ಈ ಕೃತಿಯನ್ನು ರಚಿಸಿರುವುದಾಗಿ ಹೇಳಿಕೊಂಡಿದ್ದಾನೆ. ಹೆಚ್ಚಾಗಿ ಹಲಾಯುಧ, ಎರಡನೆಯ ನಾಗವರ್ಮ (1145) ಇವರನ್ನು ಅನುಸರಿಸಿದ್ದಾನೆ. ಗ್ರಂಥದಲ್ಲಿ ಸಂಸ್ಕøತ ಶಬ್ದಗಳಿಗೆ ಕನ್ನಡ ಅರ್ಥವನ್ನು ಕೊಡಲಾಗಿದೆ. ಕೆಲವು ಅಪರೂಪದ ಕನ್ನಡ ಪದಗಳನ್ನೂ ಅನ್ಯದೇಶ್ಯ ಪದಗಳನ್ನೂ ಇಲ್ಲಿ ಕಾಣಬಹುದು. ಶಬ್ದಾರ್ಥಗಳ ಜೊತೆಗೆ ವಿವಿಧ ಕಲೆ, ಶಾಸ್ತ್ರಗಳ ಕಿರುಪರಿಚಯವನ್ನು ಕವಿ ಮಾಡಿಕೊಟ್ಟಿದ್ದಾನೆ. ಕುದುರೆಗಳು, ಸೇನಾವಿಭಾಗಗಳು, ಆಯುಧಗಳು, ಒಡವೆ, ಅಳತೆ ಮುಂತಾದ ವಿಷಯಗಳ ಬಗೆಗೆ ಪ್ರಾಸಂಗಿಕವಾಗಿ ನಿರೂಪಿತವಾಗಿವೆ. 														(ಎಸ್.ಎಚ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ